Tuesday, August 13, 2019

ಭ್ರಮೆಯ ಅರ್ಥ ಚಕ್ರದೊಳಗೆ ಸಿಕ್ಕಿಹಾಕಿಕೊಂಡಿದ್ದೇವೆ...!

ಸದ್ಯಕ್ಕೆ ದೇಶದಲ್ಲಿ ಹೊಸ ಚರ್ಚೆಯೊಂದು ಶುರುವಾಗಿದೆ- ದೇಶದ ಅರ್ಥ ವ್ಯವಸ್ಥೆ ಸರಿಯಿಲ್ಲ, ದೇಶದ ಆರ್ಥಿಕತೆ ಅಧೋಗತಿಗೆ ಹೋಗಿದೆ, ದೇಶದ ಜಿಡಿಪಿ ಕುಸಿಯುತ್ತಿದೆ.... ಇನ್ನೂ ಹತ್ತು ಹಲವು ಚರ್ಚೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಸಾಮಾನ್ಯ ಬದುಕು ಬಾಳುತ್ತಿರುವ ನನ್ನದೊಂದಿಷ್ಟು ಯೋಚನೆಗಳಿವೆ. ನಾನೊಬ್ಬ ಆರ್ಥಿಕ ತಜ್ಞ ಅಲ್ಲ- ನಾನೊಬ್ಬ ಇಂಡಸ್ಟ್ರಿಯಲಿಸ್ಟ್ ಅಲ್ಲ, ಆದರೆ ನಾನೊಬ್ಬ ಗ್ರಾಹಕ, ನಾನೊಬ್ಬ ಖರೀದಿದಾರ, ನಾನೊಬ್ಬ ಬಳಕೆದಾರ. ಈ ದೃಷ್ಟಿಯಿಂದ ನೋಡಿದರೆ ಬಹುಶಃ ಆರ್ಥಿಕತೆ ಹದಗೆಟ್ಟಿದ್ದೇ ಆದರೆ ಅದಕ್ಕೆ ಈ ದೇಶದ ಆರ್ಥಿಕ ತಜ್ಞರ ಮೌನ, ಬಂಡವಾಳ ಹೂಡಿಕೆದಾರರ ತಪ್ಪುಗಳೇ ಕಾರಣ ಅಂತ ನನಗನಿಸುತ್ತಿದೆ. ಯಾಕೆ ಅಂತೀರಾ? ಕೆಳಗೊಂದಿಷ್ಟು ಅಂಶಗಳಿವೆ. ಒಪ್ಪುವುದಾದರೆ ಒಪ್ಪಿ- ಇಲ್ಲದೇ ಹೋದರೆ ಇಲ್ಲ.
ಸದ್ಯಕ್ಕೆ ಇಡೀ ಅರ್ಥ ವ್ಯವಸ್ಥೆ ಕೇವಲ ಭ್ರಮೆ ಅಂತ ಅನಿಸುತ್ತದೆ. ನಾವೆಲ್ಲರೂ ಸೂಡೋ ಸ್ಟೇಟಸ್ ನಲ್ಲಿದ್ದೇವೆ. ಇಷ್ಟು ದಿನ ಇದ್ದದ್ದೂ ಭ್ರಮೆ, ಇನ್ಮುಂದೆ ಇರುವುದೂ ಕೂಡ ಭ್ರಮೆ. ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುವ ಕೆಲಸ ಸರ್ಕಾರಗಳಿಂದ ಯಾವಾಗ ಶುರುವಾಯ್ತೋ ಅಲ್ಲಿಂದಲೇ ಅರ್ಥ ವ್ಯವಸ್ಥೆ ಹದಗೆಟ್ಟು ಹೋಗಿದೆ. ಹೇಗೆ ಆಹಾರ ವ್ಯವಸ್ಥೆಯಲ್ಲಿ ಒಂದು ಸರಪಣಿ ಇದೆಯೋ- ಅರ್ಥ ವ್ಯವಸ್ಥೆಯಲ್ಲೂ ಒಂದು ಸರಪಣಿ ಇದ್ದೇ ಇರಬೇಕಲ್ಲ. ಬಂಡವಾಳ ಹೂಡಿಕೆದಾರರು ಮತ್ತು ಸರ್ಕಾರಗಳು ಈ ಸರಪಣಿಯನ್ನು ಕತ್ತರಿಸಿಬಿಟ್ಟರು. ಹಸಿವಾದಾಗ ಮೊದಲು ನಾವು ಊಟ ಮಾಡುತ್ತಿದ್ದೆವು, ಹಸಿವಾದಾಗ ನಾವು ಅನ್ನ-ಮುದ್ದೆ ಬೇಯಿಸಿಕೊಳ್ತಿದ್ದೆವು. ಆದರೀಗ ಅವಶ್ಯಕತೆ ಇಲ್ಲದೇ ಹೋದರೂ ಅನ್ನ ಮುದ್ದೆ ಸೊಪ್ಪು ಸಾರು ಬೇಯಿಸಿಡುವುದನ್ನು ಬಂಡವಾಳ ಹೂಡಿಕೆದಾರರು ಮಾಡ್ತಿದ್ದಾರೆ. ಅದನ್ನು ಬಳಸದೇ ಬಿಸಾಡಿದರೆ ಆರ್ಥಿಕ ವ್ಯವಸ್ಥೆ ಕುಸಿಯುತು ಅಂತಾರೆ, ಬಿಸಾಡುವ ಅನ್ನ ಮುದ್ದೆಯಿಂದಾಗಿ ಮತ್ತೆ ಅನ್ನ ಬೇಯಿಸುವವನಿಗೆ ಕೆಲಸ ಇರೋದಿಲ್ಲ, ಆತನನ್ನು ಮನೆಗೆ ಕಳುಹಿಸಿ ಇಷ್ಟು ಲಕ್ಷ ಉದ್ಯೋಗ ಕಡಿತ ಮಾಡಿದ್ದೇವೆ ಅಂತಾರೆ. ಹೌದೋ ಅಲ್ವೋ ಯೋಚನೆ ಮಾಡಿ..?
ಅಣಬೆ ರೀತಿಯಲ್ಲಿ ಸೂಪರ್​ ಮಾರ್ಕೆಟ್ ಗಳು, ಬ್ಯೂಟಿ ಪಾರ್ಲರ್ ಗಳು, ಮಾಲ್​ ಗಳು, ಶೋರೂಂ ಗಳು ತಲೆ ಎತ್ತಿವೆಯಲ್ಲ..? ನಿಜಕ್ಕೂ ಅಷ್ಟು ಅಗತ್ಯತೆ ಕಂಡು ಬರ್ತಿದೆಯಾ..? ನನಗಂತೂ ಇಲ್ಲ.
ನಮ್ಮ ಪಕ್ಕದ ರೋಡಿನಲ್ಲಿರುವ ಕಿರಾಣಿ ಅಂಗಡಿಗೆ ಹೋಗುವುದಕ್ಕೆ ಸಾಧ್ಯವಿಲ್ಲ ಅಂತ ಸೂಪರ್​ ಮಾರ್ಕೆಟ್ ಗೆ  ಬಂಡವಾಳ ಹೂಡಿದರು. ಅಲ್ಲಿಂದಲೇ ಶುರುವಾಯ್ತು ನೋಡಿ ಉಳಿದೆಲ್ಲ ಸಮಸ್ಯೆಗಳು. ನಮಗೆ ಇಷ್ಟ ಇದೆಯೋ ಇಲ್ಲವೋ, ನಮಗೆ ಅಗತ್ಯ ಇದೆಯೋ ಇಲ್ಲವೋ, ನಮಗೆ ಉಪಯೋಗಕ್ಕೆ ಬರತ್ತೋ ಬಿಡತ್ತೋ- ವಸ್ತುಗಳು ಖರೀದಿ ಮಾಡುತ್ತ ಮಾಡುತ್ತ ಎಲ್ಲವನ್ನೂ ಹಳ್ಳ ಹಿಡಿಸುತ್ತಿದ್ದೇವೆ. ಸೂಪರ್​ ಮಾರ್ಕೆಟ್ ಗಳಿಗೆ ಬರುವ ಅಕ್ಕಿಯಿಂದ ಹಿಡಿದು ಗುಂಡು ಪಿನ್​ ಗಳ ತನಕ ಎಲ್ಲವನ್ನೂ ಸ್ಟಾಕ್ ಮಾಡಲಾಗ್ತಿದೆ. ಸಾವಿರಾರು ಟನ್​ ಬೇಳೆಕಾಳುಗಳನ್ನು ಯಾವಾಗಲೋ ಖರೀದಿಸಿ ಇನ್ಯಾವಗಲೋ ಪ್ಯಾಕಿಂಗ್ ಮಾಡಿ ಮತ್ಯಾವುದೋ ರೇಟ್​ ಗೆ ಸೇಲ್ ಮಾಡಲಾಗ್ತಿದೆ. ಎಲ್ಲವೂ ಒಂದೇ ಕಡೆ ಸಿಗುತ್ತದೆ ಎಂಬ ಕಾರಣಕ್ಕೆ ನಾವು ಎಲ್ಲ ವಸ್ತುಗಳನ್ನೂ ಬಿಗ್​ ಬಜಾರ್​, ಮೋರ್​, ರಿಲಾಯನ್ಸ್ ಫ್ರೆಷ್ ಇಂತ ಕಡೆಯೇ ಖರೀದಿ ಮಾಡುತ್ತೇವೆ. ಅಲ್ಲಿಗೆ ಏನಾಯ್ತು ಅರ್ಥ ವ್ಯವಸ್ಥೆ....? ಸೂಪರ್ ಮಾರ್ಕೆಟ್ ಗಳ ಒಬ್ಬನೇ ದಲ್ಲಾಳಿಯ ಬಳಿ ಹಣ ಸಂಗ್ರಹಗೊಳ್ತಾ ಹೋಯ್ತು. ನಮಗೆ ಖರೀದಿ ಮಾಡುವ ಹುಚ್ಚು ಹಚ್ಚಿಸಿ ಅದನ್ನೇ ಅರ್ಥ ವ್ಯವಸ್ಥೆಯ ಬೆಳವಣಿಗೆ ಅಂತ ಬಿಂಬಿಸಿದರು. ಒಂದು ಸಣ್ಣ ಉದಾಹರಣೆ: ಮೊದ ಮೊಲದು ಹಾರ್ಪಿಕ್​ ತರದ ಬಾಟಲ್​ ಗಳು 500ಎಂಎಲ್, 600 ಎಂಎಲ್​ ಬರುತ್ತಿದ್ದವು. ಮೂರು ಜನರ ಮನೆಯ ಒಂದು ಟಾಯ್ಲೆಟ್ ಗೆ ಇಷ್ಟು ಸಣ್ಣ ಮಟ್ಟದ ಹಾರ್ಪಿಕ್ ಸಾಕಾಗುತ್ತಿತ್ತು. ಆದ್ರೀಗ 10 ಲೀಟರ್, 20 ಲೀಟರ್ ನ ಹಾರ್ಪಿಕ್​ ಬಂದಿದೆ. ಟಾಯ್ಲೆಟ್ ಗೆ ಸುರಿಯೋ ಹಾರ್ಪಿಕ್ ಅಷ್ಟ್ಯಾಕೆ ಬೇಕು ಅಂತ ಕೇಳಿದ್ರೆ ಹೆಲ್ತ್ ಈಸ್ ವೆಲ್ತ್ ಅಂತೇವೆ. ಪ್ರತಿದಿನ ಮೂರು ಬಾರಿ ಟಾಯ್ಲೆಟ್ ಕಮೋಡ್ ಗೆ ಹಾರ್ಪಿಕ್​ ಹಾಕಿ ಉಜ್ಜುತ್ತೇವೆ. ಜನ ಹೆಚ್ಚಾಗಿಲ್ಲ- ಮನೆಯಲ್ಲಿರೋದು ಮೂರೇ ಮಂದಿ. ಆದರೆ ನಾವು ಬಳಸೋ ಹಾರ್ಪಿಕ್ ಅಗತ್ಯಕ್ಕಿಂತ 10 ಪಟ್ಟು ಹೆಚ್ಚು ಮಾಡಿಕೊಂಡಿದ್ದೇವೆ. ಹಾರ್ಪಿಕ್ ಖರೀದಿ ಹೆಚ್ಚಾದಷ್ಟು ಪೌಷ್ಟಿಕಾಂಶ ಬರುತ್ತದೆ ಎನ್ನೋದಕ್ಕೆ ಅದೇನು ತಿನ್ನೋ ವಸ್ತುವಾ? ಅಲ್ಲ- ಆದರೆ ನಾವು ಅನಗತ್ಯವಾಗಿ ಖರೀದಿ ಮಾಡುವ ಇಂಥದ್ದೊಂದು ವಸ್ತು ಯಾರ ಜೇಬು ತುಂಬಿಸುತ್ತಿದೆ..? ಯಾರ ಜೇಬು ಖಾಲಿ ಮಾಡಿಸುತ್ತಿದೆ....

ಬಂಡವಾಳ ಹೂಡಿಕೆ ಮಾಡುವವರೇನು ಸೇವಾಕರ್ತರಾ..? ಕೊತ್ತಂಬರಿ ಸೊಪ್ಪು ಮಾರುವವನಿಗೆ ಯಾವ ಲಾಭದ ಆಸೆ ಇರುತ್ತದೋ ಕಾರು ಕಂಪನಿಯ ಮಾಲೀಕನಿಗೂ ಅಷ್ಟೇ ಲಾಭದ ಆಸೆ ಇರುತ್ತದೆ. ಕೊತ್ತಂಬರಿ ಸೊಪ್ಪು ಮಾರುವವನು ಬಾಯಿ ಹರಿದುಕೊಂಡು ಕೂಗಿ ನಮ್ಮನ್ನು ಅಟ್ರಾಕ್ಟ್ ಮಾಡಿ ಸೊಪ್ಪು ಮಾರ್ತಾನೆ- ಸಾವಿರಾರು ಕೋಟಿ ಬಂಡವಾಳ ಹೂಡಿದವನಿಗೆ ಬೇರೆಯದ್ದೇ ರೀತಿಯಲ್ಲಿ ನಮ್ಮನ್ನು ಅಟ್ರಾಕ್ಟ್ ಮಾಡಿ ಜೇಬು ತುಂಬಿಸಿಕೊಳ್ತಾನೆ- ಇದನ್ನು ನೀವೆಲ್ಲ ಆರ್ಥಿಕ ಪ್ರಗತಿ, ಜಿಡಿಪಿ ಗ್ರೋತ್ ಅಂತ ಕರೀತಿರಿ ಅಂತಾದ್ರೆ ಅದು ಭ್ರಮೆಯೇ ಅಲ್ಲವಾ...?

ಕಾರು ಕಂಪನಿಗಳಲ್ಲಿ 350000 ಉದ್ಯೋಗಗಳನ್ನು ಕಡಿತ ಮಾಡಲಾಯ್ತು ಅನ್ನೋ ವರದಿಯಿದೆ. ಕಾರು ಕಂಪನಿಗಳು ಜನರ ಮನಸ್ಸಿನ ಭಾವನೆ, ಆರ್ಥಿಕತೆ ನೋಡಿಕೊಂಡು ಕಾರುಗಳ ಉತ್ಪಾದನೆ ಮಾಡಿದರಾ..?  ಬೆಂಗಳೂರಲ್ಲಿ 1 ಕೋಟಿ ಜನ ಇದ್ದಾರೆ, ಅದರಲ್ಲಿ ಅರ್ಧದಷ್ಟು ಜನ ಮುಂದಿನ ಎರಡು ವರ್ಷಗಳಲ್ಲಿ ಕಾರು ಖರೀದಿ ಮಾಡ್ತಾರೆ ಅಂತ ಭಾವಿಸಿ ಕಾರು ಉತ್ಪಾದನೆ ಮಾಡೋದು ಆರ್ಥಿಕತೆಗೆ ಬಂಡವಾಳಶಾಹಿಗಳು ಕೊಟ್ಟ ಕೊಡುಗೆಯಾ..?

ಕೆಲವು ವರ್ಷಗಳ ಹಿಂದೆ- ರಿಯಲ್ ಎಸ್ಟೇಟ್ ಫೀಲ್ಡ್ ಬೂಮ್​ ಆಗಿತ್ತು. ಆ ಸಂದರ್ಭದಲ್ಲಿ ಹಿಂದೆ ಮುಂದೆ ನೋಡದೇ ಅಪಾರ್ಟ್​​ಮೆಂಟ್ ಗಳನ್ನು ಕಟ್ಟಿದವರೆಷ್ಟೊ.. ಲೇಔಟ್ ಗಳನ್ನು ಮಾಡಿದವರೆಷ್ಟೋ... ಸೈಟ್ ಗಳನ್ನು ಮಾರಾಟಕ್ಕೆ ನಿಂತವರೆಷ್ಟೋ.... ಸದ್ಯಕ್ಕೆ ಜನ ಫ್ಲ್ಯಾಟ್ ಖರೀದಿ ಮಾಡ್ತಿಲ್ಲ, ಅಪಾರ್ಟ್​ಮೆಂಟ್ ಗಳ ಕಡೆ ತಲೆ ಹಾಕೋದಕ್ಕಿಂತ ಬಾಡಿಗೆ ಮನೆಯೇ ಒಳ್ಳೆಯದು ಅಂತ ಅನಿಸುತ್ತಿದೆ, ಸೈಟ್ ಗಳನ್ನು ಮಾರಾಟ ಮಾಡುವವರೇ ಜಾಸ್ತಿ ಆದಾಗ ಖರೀದಿ ಮಾಡುವುವರು ಯಾರಿರ್ತಾರೆ...? ಇದನ್ನು ಆರ್ಥಿಕ ಕುಸಿತ ಅಂತ ಕರೆಯೋದಾದರೆ ಇದಕ್ಕೆ ಕಾರಣ ಯಾರು..? ಮತ್ತದೇ ಬಂಡವಾಳ ಹೂಡಿಕೆದಾರರೇ ತಾನೆ..?

ಸಿದ್ದಾರ್ಥ್ ಅವರ ಸಾವಿನಿಂದ ಟ್ಯಾಕ್ಸ್ ಟೆರರಿಸಂ ಅನ್ನೋ ಮಾತು ಬಂದವು. ಟ್ಯಾಕ್ಸ್ ಟೆರರಿಸಂ ನ ಚರ್ಚೆಯನ್ನು ನಾವು ಸದ್ಯಕ್ಕೆ ಮಾತನಾಡೋದು ಬೇಡ- ಅದು ಬೇರೆಯದ್ದೇ ಚರ್ಚೆ. ಆದರೆ ಸಿದ್ದಾರ್ಥ್ ಹೂಡಿದ್ದ ಬಂಡವಾಳ ಎಷ್ಟು ಅಗತ್ಯ ಇತ್ತು ಅನ್ನೋ ಚರ್ಚಯನ್ನು ಯಾರು ಯಾಕೆ ಮಾಡ್ತಿಲ್ಲ..? ದೇಶಾದ್ಯಂತ 1700 ಕ್ಕೂ ಹೆಚ್ಚು ಕೆಫೆ ಕಾಫಿ ಡೇ ಗಳನ್ನು ಸಿದ್ದಾರ್ಥ್ ರೆಡಿ ಮಾಡಿದ್ದರು. ಇದರಲ್ಲಿ ಎಷ್ಟು ಕೆಫೆ ಕಾಫಿ ಡೇ ಗಳು ನಷ್ಟದಲ್ಲಿದ್ದವು ಅನ್ನೋದೂ ಕೂಡ ಬೇಕಲ್ಲ... ನಷ್ಟದಲ್ಲಿದ್ದರೂ ಕೂಡ ಅಥವಾ ನಿರೀಕ್ಷೆಗಿಂತ ಜನರೇ ಬರದಿದ್ದರೆ ಅದನ್ನೂ ಮುಂದುವರೆಸಿ ಆ ಮೂಲಕ ಸೂಡೋ ಡೆವಲಪ್ಮೆಂಟ್ ಸೃಷ್ಟಿ ಮಾಡಲಾಗುತ್ತಿತ್ತಲ್ಲ ಅದಕ್ಕೆ ಯಾರು ಹೊಣೆ..?

ನಮ್ಮ ನಿಮ್ಮೆಲ್ಲರ ಮನಸ್ಥಿತಿಗಳೇ ಆರ್ಥಿಕ ಕುಸಿತಕ್ಕೆ, ಆರ್ಥಿಕ ಹಿಂಜರಿತಕ್ಕೆ, ಆರ್ಥಿಕ ಅಸಮತೋಲನಕ್ಕೆ ಕಾರಣ ಅಂತ ನನ್ನ ಭಾವನೆ. ನಮಗೆ ಬ್ರ್ಯಾಂಡೆಡ್ ಐಟಂ ಗಳ ಹಚ್ಚು ತಲೆಯೊಳಗೆ ಹೊಕ್ಕಿದ್ದೇ ತಡ- ಇಂಥ ಏರಿಳಿತಗಳಿಗೆ ಕಾರಣವಾಗಿದೆ. 100 ರೂ ಕೊಡುವ ಕಡೆ 1000 ರೂ ಕೊಡ್ತಿದ್ದೇವೆ, 12 ರೂ. ಗಿಫ್ಟ್ ವೋಚರ್ ಆಸೆಗೆ 1000 ರೂಪಾಯಿ ವ್ಯಯಿಸೋ ಕಡೆ 5000 ಸಾವಿರ ಶಾಪಿಂಗ್ ಮಡ್ತಿದ್ದೇವೆ, 17 ರೂಪಾಯಿ ಕ್ಯಾಶ್ ಬ್ಯಾಕ್ ಬರತ್ತೆ ಎನ್ನೋ ಚಪಲಕ್ಕೆ ಸುಖಾಸುಮನ್ನೆ ಹಣವನ್ನು ಮೊಬೈಲ್​ ಆಪ್​ ಗಳನ್ನು ಟರ್ನ್ ಓವರ್ ಮಾಡ್ತಿದ್ದೇವೆ.
ಇದೆಲ್ಲ ಕೇವಲ ಭ್ರಮೆಯ ಆರ್ಥಿಕ ಬೆಳವಣಿಗೆ ಅಂತ ಅನಿಸೋದಿಲ್ಲವಾ..?