Thursday, August 23, 2012

ನಡೆದೂ ನಡೆದೂ ನಾಕ...


ನಡೆಯೋದ್ರಲ್ಲಿ ಸುಖ ಇದೆ.
ಇದು ಮೊಟ್ಟಮೊದಲ ಸಲ ನಾನು ಅನ್ವೇಷಣೆ ಮಾಡಿ ಹೇಳ್ತಿರೋ ಮಾತುಗಳಲ್ಲ. ಹತ್ತಾರು ಸಲ ನೀವೂ ಈ ಮಾತುಗಳನ್ನ ಎಲ್ಲಿಯಾದ್ರೂ ಕೇಳಿರ್ತೀರಿ - ಓದಿರ್ತೀರಿ. ಏನೇ ಹೇಳಿ- ನಡೆಯೋದು ಏನೋ ಒಂಥರಾ ಮಜಾ ಕೊಡುತ್ತೆ.
ಈ ಖದೀಮ ಮನಸ್ಸಿಗೆ ವಾರವಿಡೀ ಒಂದೇ ಥರಹ ಇರೋದಕ್ಕೆ ಬರೋದಿಲ್ಲ. ಅಪ್ಪ ಆಯಿ ಹತ್ತಿರ ವಾದ ಮಾಡಿಕೊಂಡ ದಿನ ಒಂಥರಾ , ಅವಳು ಮುನಿಸಿಕೊಂಡಾಗ ಮತ್ತೊಂದು ಥರಾ , ಮಾಡಿದ ಸುದ್ದಿ ಎರಡೇ ನಿಮಿಷವಾದರೂ ಅದು ಬಂದಾಗ- ಬರದೇ ಇದ್ದಾಗ ಇನ್ನೊಂದು ಥರ, ಹಿಂದುಗಡೆ ಜೇಬಿನ ಪರ್ಸು ದಪ್ಪವಾಗಿದ್ದಾಗ ಒಂದು ರೀತಿ - ತಿಂಗಳ ಕೊನೆಗೆ ಹತ್ತೇ ರೂಪಾಯಿ ಉಳಿದು , ಹೊಸ ತಿಂಗಳಿನ 7 ನೇ ತಾರೀಖು ಬಂದರೂ ಅಕೌಂಟಿಗೆ ಸಂಬಳ ಬೀಳದೇ ಇದ್ದಾಗ ಮತ್ತೊಂದು ಥರಾ, ಒಂಟಿ ಜೀವದ ಸುಪ್ತಕಾಮ ಕೆರಳಿ ನಿಂತಾಗ ಮತ್ಯಾವುದೋ ಥರಾ...... ಒಟ್ಟಿನಲ್ಲಿ ಖದೀಮ ಮನಸ್ಸು ಹುತಾತ್ಮನ ಸಾಲಿಗೇ ಸೇರುತ್ತೆ. ಮನಸ್ಸು ವಿಲವಿಲ ಅನ್ನುವ ಇಂಥ ಹೊತ್ತಲ್ಲಿ ನೆನಪಾಗೋದು- ಒಂದು ಸುತ್ತಿನ ನಡಿಗೆ. ಕಡ್ಡಾಯವಾಗಿ ದಿನವೂ ನಡೆಯಲೇಬೇಕು ಅನ್ನುವುದಕ್ಕೆ ದೇಹಕ್ಕೆ ಶುಗರ್ ಇಲ್ಲ. ಕೊಬ್ಬು(?) ಮೊದಲೇ ಇಲ್ಲ. ಕಟ್ಟು ನಿಟ್ಟಾಗಿ ವ್ಯಾಯಾಮದ ರೀತಿ ನಡೆಯುವುದಕ್ಕೆ ಉದಾಸೀನವೇ ಅಡ್ಡಿ.
ಹೀಗಾಗಿ ಹೇಳಲಾಗದ ಆತಂಕವೊಂದು ಕಾಡಿದಾಗ ದುತ್ತನೆ ಎದ್ದು ಹೊರ ನಡೆದು... ನಡೆದು..... ನಡೆದು..... ಯೆಸ್‌ ಅದೊಂದೇ ಗೊತ್ತು., ನಡೆದೂ ನಡೆದೂ ತನ್ನಿಂದ ತಾನೇ ಮನಸ್ಸು ಹಗುರವಾಗುತ್ತೆ. ನಡೆದೂ ನಡೆದೂ ಹಣೆಯ ಉಬ್ಬು ಬೆವರ ಸಾಲಿನಲ್ಲಿ ತೊಯ್ದು ಉಸ್ ಅನ್ನಬೇಕು ಅಷ್ಟೆ- ಚಿಗಿತಿದ್ದ ಕಾಮ, ಅಬ್ಬರಿಸುತ್ತಿದ್ದ ಕೋಪ, ಅವಳು ಇನ್ಯಾರಿಗೋ ಕಾಲ್ ಮಾಡಿದ್ದಾಳೆ ಅನ್ನುವ ಪೊಸೆಸಿವ್ ನೆಸ್ ನ ಪರಮಭಾವ, ಅಪ್ಪ ಆಯಿಯ ಜೊತೆ ಮಾಡಿಕೊಂಡ ವಾದ ವಿವಾದ ಅಲಿಯಾಸ್ ಜಗಳ, ದುಡ್ಡಿಲ್ಲದ ಆತಂಕ , ದುಡಿಮೆಯಿಲ್ಲ ಅನ್ನುವ ನಿರಾಸೆ ಎಲ್ಲವೂ ಖಾಲಿ. ನಡೆದೂ ನಡೆದೂ ಖಾಲಿ.
ಎಲ್ಲರಿಗೂ ಹೀಗೇ ಆಗುತ್ತದೋ ಇಲ್ಲವೋ ಗೊತ್ತಿಲ್ಲ- ಆದರೆ ನಡೆದೂ ನಡೆದೂ ಸುಸ್ತಾದಷ್ಟು ಮನಸ್ಸು ಮುಗಿಲು ಮುಟ್ಟುವುದು ಖಂಡಿತ. ನಡೆದಷ್ಟೂ ಮನಸಿಗೆ ಹುಮ್ಮಸ್ಸು ತುಂಬುವುದು ಗ್ಯಾರಂಟಿ. ಒಂದು ರೀತಿ ರಿಫ್ರೆಷ್ ಆಗೋದು ಶತಸಿದ್ದ. ಅಹಂಭಾವ ಅತಿರೇಕಗೊಂಡು ಸುಖಾ ಸುಮ್ಮನೆ ಗೆಳೆಯರೊಟ್ಟಿಗೆ ಅಡಿದ ಜಗಳ ಎಂಥ ಮೂರ್ಖತನದ್ದು ಅಂತ ಗೊತ್ತಾಗೋದು ನಡಿಗೆಯಿಂದ. ಅವಳ ಮೇಲಿನ ಮೋಹ ವಿಪರೀತಗೊಂಡದ್ದು- ಸುಳ್ಳು ಬೇಸರವೊಂದನ್ನು ತಂದಿಟ್ಟುಕೊಂಡದ್ದು ಎಷ್ಟು ಸಿಲ್ಲಿ ಅನಿಸೋದು ನಡಿಗೆಯಿಂದ. ಎಲ್ಲ ಬೇಸರಗಳಿಗೂ ಎಳ್ಳು ನೀರು ಹಾಕಿ ಪಿಂಡ ಬಿಡೋಣ ಅನಿಸಿ ಮನಸ್ಸು ನಗೋದು ನಡಿಗೆಯಿಂದ. ಅದಕ್ಕೇ ಹೇಳೋದು- ನಡೆಯೋದ್ರಲ್ಲಿ ಮಜಾ ಇದೆ.
ನನ್ನಜ್ಜನಿಗೆ ಆಚೀಚೆ 85 ವರ್ಷ. ಗಟ್ಟಿಮುಟ್ಟು ಜೀವ. ಈ ವಯಸ್ಸಲ್ಲೂ ಪ್ರತಿ ದಿನ ಕನಿಷ್ಠ 6-7 ಕಿಲೋ ಮೀಟರ್ ನಡೆದುಹೋಗಿ ದೇವಸ್ಥಾನದ ಪೂಜೆ ಮಾಡ್ತಾರೆ. ಅದೆಷ್ಟೋ ಜನ ಹೇಳಿದ್ದಿದೆ- ಇಂಥ ವಯಸ್ಸಲ್ಲಿ ಈ ಅಜ್ಜಯ್ಯಂಗೆ ದುಡಿಮೆ ಬೇಕಾ? ಮಕ್ಕಳಾದ್ರೂ ಬುದ್ದಿ ಹೇಳಿ ಮನೆಯಲ್ಲೇ ಕೂರಿಸಬಾರದಾ? ಅಂತ. ನಿಜ, ಆ ವಯಸ್ಸಲ್ಲಿ ದುಡಿಯೋ ಅವಶ್ಯಕತೆ ಬೇಕಿಲ್ಲ. ಆದರೆ ನನ್ನಜ್ಜಯ್ಯ ನಡೆದೂ ನಡೆದೂ ದೇವಸ್ಥಾನದ ಪೂಜೆ ಮಾಡೋದು ದುಡಿಬೇಕು ಅಂತಲ್ಲ. ನನಗನಿಸೋದು ಅವರಿಗೆ ನಡೆಯೋದಿಷ್ಟ. ಅದಕ್ಕೇ ದೇವಸ್ಥಾನದ ನೆಪ ಮಾಡಿಕೊಂಡು ಮಕ್ಕಳು ಬೈದು ಕೂರಿಸಿದರೂ ಕೂಡ ನಡೆಯತೊಡಗ್ತಾರೆ. ನಡೆದಷ್ಟೂ ಅಜ್ಜಯ್ಯನ ಮನಸ್ಸು ನಿರಾಳ. ನಡೆದಷ್ಟೂ ಖುಷಿ. ನಡೆದಷ್ಟೂ ಸಂಭ್ರಮ, 85 ರ ಪ್ರಾಯದಲ್ಲೂ ನಡೆದಷ್ಟೂಯೌವನ, ನಡೆದಷ್ಟೂ ಸಾಧನೆ. ನಡೆಯೋದೇ ಜೀವನ. ನಡೆದು ನಡೆದೇ ಮಗ ಸತ್ತ ನೆನಪನ್ನು ಅಜ್ಜಯ್ಯ ಮರೆತಿದ್ದಾರೆ. ಅಜ್ಜಯ್ಯ ನಡೆಯೋದು ನಿಲ್ಲಿಸಿ ಮನೆಯಲ್ಲೇ ಕೂತ ದಿನ ಅವರಿಗೆ ಸಂಜೆಯ ಹೊತ್ತಿಗೆ ಎಂದೂ ಇಲ್ಲದ ಜ್ವರ ನೆತ್ತಿಗೇರುತ್ತೆ. ಎಂದೂ ಇಲ್ಲದ ಕೆಮ್ಮು ರಾತ್ರಿ ಇಡೀ ಕಾಡುತ್ತೆ. ಹಠ ಹಿಡಿದು ಮರುದಿನ ಎದ್ದು ನಡೆದರೆ ಸಾಕು- ಅಜ್ಜಯ್ಯ ಫುಲ್ ರಿಲೀಫ್‌. ನಡಿಗೆಯ ಸುಖ ಅಂದರೆ ಅದೇ ಇರಬೇಕು.
ತಿರುಪತಿ, ಧರ್ಮಸ್ಥಳ, ಶಬರಿಮಲೆಗೆ ಪಾದಯಾತ್ರೆ ಮಾಡುವುದರ ಹಿನ್ನೆಲೆಯೂ ಇಂಥದ್ದೇ. ಪಾದಕ್ಕೆ ಬೊಬ್ಬೆಯಾಗಿ ರಕ್ತ ಒಸರುವಷ್ಟು ನಡೆದವರೂ ಕೂಡ ಹ್ಯಾಪಿಯಾಗಿರ್ತಾರೆ. ಅದಕ್ಕೆ ಕಾರಣ- ಸನ್ನಿಧಿಗೆ ಕರೆಸಿಕೊಂಡ ದೇವರಲ್ಲ- ನಡೆದು ನಡೆದೂ ದಕ್ಕಿದ ಸುಖ.
ಎರಡು ಚಕ್ರದ ಬೈಕನ್ನು ನಂಬಿಕೊಂಡ ಜೀವ ನಮ್ಮದು-- ಸಂಜೆಯ ಹೊತ್ತಿಗೆ ಸಣ್ಣ ಸಣ್ಣ ಸಂಗತಿಗಳಿಗೂ ಮನಸ್ಸು ಮುಗುಮ್ಮಾಗಿ ಸಿಟ್ಟಾಗುತ್ತೆ. ಮರುಗುತ್ತೆ, ಪ್ರಾಯದಲ್ಲಿನ್ನೂ ಬಚ್ಚಾ ಅನ್ನುವಾಗಲೇ ಕೋಪ ವಿಪರೀತ. ದುರಂತ ಎಂದರೆ , ಹಳೆಯ ಕಾಲಕ್ಕೂ ಇಂದಿನ ಕಾಲಕ್ಕೂ ಇರುವ ವ್ಯತ್ಯಾಸಗಳನ್ನ ಪಟ್ಟಿ ಮಾಡುತ್ತಾ ಹೋದರೆ ನಡಿಗೆ ಕೂಡ ಆ ಸಾಲಿಗೆ ಸೇರುತ್ತೆ. ಸರಿಯಾಗಿ ಗಮನಿಸಿ ನೋಡಿ ನಾವಷ್ಟೇ ನಡಿಗೆಯನ್ನು ಮರೆತಿಲ್ಲ , ನಮ್ಮ ಮಕ್ಕಳಿಗೂ ನಡೆಯುವುದನ್ನು ಮರೆಸುತ್ತಿದ್ದೀವಿ. ಗಾಡಿಗಳು ಹೆಚ್ಚಾಗಿವೆ, ಯಾವ ಕ್ಷಣಕ್ಕೆ ಎಲ್ಲಿ ಆಕ್ಸಿಡೆಂಟ್ ಆಗಿಬಿಡತ್ತೋ ಎನ್ನುವ ಕಳವಳ ನಮ್ಮದು , ದಿನ ಬೆಳಗಾದರೆ ಶಾಲೆಗೆ ಹೋಗುವುದಕ್ಕೂ ಓಮಿನಿ, ಆಟೋ , ಸ್ಕೂಲ್ ಗಾಡಿಗಳು ಮನೆ ಮುಂದೆ ನಿಲ್ಲುತ್ತವೆ. ನಮ್ಮ ಮಕ್ಕಳನ್ನ ಗಾಡಿಗಳಲ್ಲೇ ಕೊಂಡೊಯ್ದು ಗಾಡಿಗಳಲ್ಲೇ ಮನೆಗೆ ತಂದು ಬಿಡ್ತಾರೆ. ನಡಿಯೋದು ಹೇಗೆ?  ಆಫೀಸಿಗೆ ಬೈಕು , ಆಟೋ , ಕಾರು , ಬಸ್ಸು.... ನಡೆಯೋದು ಅಂದ್ರೆ ದೂರ ದೂರ.  ಸುಮ್ಮನೆ ಕೈ ಬೀಸಿ ನಡೆಯುವುದಕ್ಕೂ ಆಟ ಆಡುವುದಕ್ಕೂ ವ್ಯತ್ಯಾಸ ಇದ್ದೇ ಇದೆ.
ಹತ್ತಾರು ಕಾರಣಗಳ ಮಧ್ಯೆ ಉಳಿದೆಲ್ಲ ಸಂಗತಿಗಳ ಹಾಗೆ ನಮ್ಮ ನಮ್ಮ ನಡಿಗೆ ಕೂಡ ಬದಲಾಗಿದೆ. ನಡೆಯುವ ವೇಗವೂ ಬದಲಾಗಿದೆ.
ಅದಕ್ಕೇ ಪುನಃ ಹೇಳಿದ್ದು - ನಡೆದೂ ನಡೆದೂ ನಾಕ ಕಂಡವರೇ ಹಿತವರು.