Tuesday, August 13, 2019

ಭ್ರಮೆಯ ಅರ್ಥ ಚಕ್ರದೊಳಗೆ ಸಿಕ್ಕಿಹಾಕಿಕೊಂಡಿದ್ದೇವೆ...!

ಸದ್ಯಕ್ಕೆ ದೇಶದಲ್ಲಿ ಹೊಸ ಚರ್ಚೆಯೊಂದು ಶುರುವಾಗಿದೆ- ದೇಶದ ಅರ್ಥ ವ್ಯವಸ್ಥೆ ಸರಿಯಿಲ್ಲ, ದೇಶದ ಆರ್ಥಿಕತೆ ಅಧೋಗತಿಗೆ ಹೋಗಿದೆ, ದೇಶದ ಜಿಡಿಪಿ ಕುಸಿಯುತ್ತಿದೆ.... ಇನ್ನೂ ಹತ್ತು ಹಲವು ಚರ್ಚೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಸಾಮಾನ್ಯ ಬದುಕು ಬಾಳುತ್ತಿರುವ ನನ್ನದೊಂದಿಷ್ಟು ಯೋಚನೆಗಳಿವೆ. ನಾನೊಬ್ಬ ಆರ್ಥಿಕ ತಜ್ಞ ಅಲ್ಲ- ನಾನೊಬ್ಬ ಇಂಡಸ್ಟ್ರಿಯಲಿಸ್ಟ್ ಅಲ್ಲ, ಆದರೆ ನಾನೊಬ್ಬ ಗ್ರಾಹಕ, ನಾನೊಬ್ಬ ಖರೀದಿದಾರ, ನಾನೊಬ್ಬ ಬಳಕೆದಾರ. ಈ ದೃಷ್ಟಿಯಿಂದ ನೋಡಿದರೆ ಬಹುಶಃ ಆರ್ಥಿಕತೆ ಹದಗೆಟ್ಟಿದ್ದೇ ಆದರೆ ಅದಕ್ಕೆ ಈ ದೇಶದ ಆರ್ಥಿಕ ತಜ್ಞರ ಮೌನ, ಬಂಡವಾಳ ಹೂಡಿಕೆದಾರರ ತಪ್ಪುಗಳೇ ಕಾರಣ ಅಂತ ನನಗನಿಸುತ್ತಿದೆ. ಯಾಕೆ ಅಂತೀರಾ? ಕೆಳಗೊಂದಿಷ್ಟು ಅಂಶಗಳಿವೆ. ಒಪ್ಪುವುದಾದರೆ ಒಪ್ಪಿ- ಇಲ್ಲದೇ ಹೋದರೆ ಇಲ್ಲ.
ಸದ್ಯಕ್ಕೆ ಇಡೀ ಅರ್ಥ ವ್ಯವಸ್ಥೆ ಕೇವಲ ಭ್ರಮೆ ಅಂತ ಅನಿಸುತ್ತದೆ. ನಾವೆಲ್ಲರೂ ಸೂಡೋ ಸ್ಟೇಟಸ್ ನಲ್ಲಿದ್ದೇವೆ. ಇಷ್ಟು ದಿನ ಇದ್ದದ್ದೂ ಭ್ರಮೆ, ಇನ್ಮುಂದೆ ಇರುವುದೂ ಕೂಡ ಭ್ರಮೆ. ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುವ ಕೆಲಸ ಸರ್ಕಾರಗಳಿಂದ ಯಾವಾಗ ಶುರುವಾಯ್ತೋ ಅಲ್ಲಿಂದಲೇ ಅರ್ಥ ವ್ಯವಸ್ಥೆ ಹದಗೆಟ್ಟು ಹೋಗಿದೆ. ಹೇಗೆ ಆಹಾರ ವ್ಯವಸ್ಥೆಯಲ್ಲಿ ಒಂದು ಸರಪಣಿ ಇದೆಯೋ- ಅರ್ಥ ವ್ಯವಸ್ಥೆಯಲ್ಲೂ ಒಂದು ಸರಪಣಿ ಇದ್ದೇ ಇರಬೇಕಲ್ಲ. ಬಂಡವಾಳ ಹೂಡಿಕೆದಾರರು ಮತ್ತು ಸರ್ಕಾರಗಳು ಈ ಸರಪಣಿಯನ್ನು ಕತ್ತರಿಸಿಬಿಟ್ಟರು. ಹಸಿವಾದಾಗ ಮೊದಲು ನಾವು ಊಟ ಮಾಡುತ್ತಿದ್ದೆವು, ಹಸಿವಾದಾಗ ನಾವು ಅನ್ನ-ಮುದ್ದೆ ಬೇಯಿಸಿಕೊಳ್ತಿದ್ದೆವು. ಆದರೀಗ ಅವಶ್ಯಕತೆ ಇಲ್ಲದೇ ಹೋದರೂ ಅನ್ನ ಮುದ್ದೆ ಸೊಪ್ಪು ಸಾರು ಬೇಯಿಸಿಡುವುದನ್ನು ಬಂಡವಾಳ ಹೂಡಿಕೆದಾರರು ಮಾಡ್ತಿದ್ದಾರೆ. ಅದನ್ನು ಬಳಸದೇ ಬಿಸಾಡಿದರೆ ಆರ್ಥಿಕ ವ್ಯವಸ್ಥೆ ಕುಸಿಯುತು ಅಂತಾರೆ, ಬಿಸಾಡುವ ಅನ್ನ ಮುದ್ದೆಯಿಂದಾಗಿ ಮತ್ತೆ ಅನ್ನ ಬೇಯಿಸುವವನಿಗೆ ಕೆಲಸ ಇರೋದಿಲ್ಲ, ಆತನನ್ನು ಮನೆಗೆ ಕಳುಹಿಸಿ ಇಷ್ಟು ಲಕ್ಷ ಉದ್ಯೋಗ ಕಡಿತ ಮಾಡಿದ್ದೇವೆ ಅಂತಾರೆ. ಹೌದೋ ಅಲ್ವೋ ಯೋಚನೆ ಮಾಡಿ..?
ಅಣಬೆ ರೀತಿಯಲ್ಲಿ ಸೂಪರ್​ ಮಾರ್ಕೆಟ್ ಗಳು, ಬ್ಯೂಟಿ ಪಾರ್ಲರ್ ಗಳು, ಮಾಲ್​ ಗಳು, ಶೋರೂಂ ಗಳು ತಲೆ ಎತ್ತಿವೆಯಲ್ಲ..? ನಿಜಕ್ಕೂ ಅಷ್ಟು ಅಗತ್ಯತೆ ಕಂಡು ಬರ್ತಿದೆಯಾ..? ನನಗಂತೂ ಇಲ್ಲ.
ನಮ್ಮ ಪಕ್ಕದ ರೋಡಿನಲ್ಲಿರುವ ಕಿರಾಣಿ ಅಂಗಡಿಗೆ ಹೋಗುವುದಕ್ಕೆ ಸಾಧ್ಯವಿಲ್ಲ ಅಂತ ಸೂಪರ್​ ಮಾರ್ಕೆಟ್ ಗೆ  ಬಂಡವಾಳ ಹೂಡಿದರು. ಅಲ್ಲಿಂದಲೇ ಶುರುವಾಯ್ತು ನೋಡಿ ಉಳಿದೆಲ್ಲ ಸಮಸ್ಯೆಗಳು. ನಮಗೆ ಇಷ್ಟ ಇದೆಯೋ ಇಲ್ಲವೋ, ನಮಗೆ ಅಗತ್ಯ ಇದೆಯೋ ಇಲ್ಲವೋ, ನಮಗೆ ಉಪಯೋಗಕ್ಕೆ ಬರತ್ತೋ ಬಿಡತ್ತೋ- ವಸ್ತುಗಳು ಖರೀದಿ ಮಾಡುತ್ತ ಮಾಡುತ್ತ ಎಲ್ಲವನ್ನೂ ಹಳ್ಳ ಹಿಡಿಸುತ್ತಿದ್ದೇವೆ. ಸೂಪರ್​ ಮಾರ್ಕೆಟ್ ಗಳಿಗೆ ಬರುವ ಅಕ್ಕಿಯಿಂದ ಹಿಡಿದು ಗುಂಡು ಪಿನ್​ ಗಳ ತನಕ ಎಲ್ಲವನ್ನೂ ಸ್ಟಾಕ್ ಮಾಡಲಾಗ್ತಿದೆ. ಸಾವಿರಾರು ಟನ್​ ಬೇಳೆಕಾಳುಗಳನ್ನು ಯಾವಾಗಲೋ ಖರೀದಿಸಿ ಇನ್ಯಾವಗಲೋ ಪ್ಯಾಕಿಂಗ್ ಮಾಡಿ ಮತ್ಯಾವುದೋ ರೇಟ್​ ಗೆ ಸೇಲ್ ಮಾಡಲಾಗ್ತಿದೆ. ಎಲ್ಲವೂ ಒಂದೇ ಕಡೆ ಸಿಗುತ್ತದೆ ಎಂಬ ಕಾರಣಕ್ಕೆ ನಾವು ಎಲ್ಲ ವಸ್ತುಗಳನ್ನೂ ಬಿಗ್​ ಬಜಾರ್​, ಮೋರ್​, ರಿಲಾಯನ್ಸ್ ಫ್ರೆಷ್ ಇಂತ ಕಡೆಯೇ ಖರೀದಿ ಮಾಡುತ್ತೇವೆ. ಅಲ್ಲಿಗೆ ಏನಾಯ್ತು ಅರ್ಥ ವ್ಯವಸ್ಥೆ....? ಸೂಪರ್ ಮಾರ್ಕೆಟ್ ಗಳ ಒಬ್ಬನೇ ದಲ್ಲಾಳಿಯ ಬಳಿ ಹಣ ಸಂಗ್ರಹಗೊಳ್ತಾ ಹೋಯ್ತು. ನಮಗೆ ಖರೀದಿ ಮಾಡುವ ಹುಚ್ಚು ಹಚ್ಚಿಸಿ ಅದನ್ನೇ ಅರ್ಥ ವ್ಯವಸ್ಥೆಯ ಬೆಳವಣಿಗೆ ಅಂತ ಬಿಂಬಿಸಿದರು. ಒಂದು ಸಣ್ಣ ಉದಾಹರಣೆ: ಮೊದ ಮೊಲದು ಹಾರ್ಪಿಕ್​ ತರದ ಬಾಟಲ್​ ಗಳು 500ಎಂಎಲ್, 600 ಎಂಎಲ್​ ಬರುತ್ತಿದ್ದವು. ಮೂರು ಜನರ ಮನೆಯ ಒಂದು ಟಾಯ್ಲೆಟ್ ಗೆ ಇಷ್ಟು ಸಣ್ಣ ಮಟ್ಟದ ಹಾರ್ಪಿಕ್ ಸಾಕಾಗುತ್ತಿತ್ತು. ಆದ್ರೀಗ 10 ಲೀಟರ್, 20 ಲೀಟರ್ ನ ಹಾರ್ಪಿಕ್​ ಬಂದಿದೆ. ಟಾಯ್ಲೆಟ್ ಗೆ ಸುರಿಯೋ ಹಾರ್ಪಿಕ್ ಅಷ್ಟ್ಯಾಕೆ ಬೇಕು ಅಂತ ಕೇಳಿದ್ರೆ ಹೆಲ್ತ್ ಈಸ್ ವೆಲ್ತ್ ಅಂತೇವೆ. ಪ್ರತಿದಿನ ಮೂರು ಬಾರಿ ಟಾಯ್ಲೆಟ್ ಕಮೋಡ್ ಗೆ ಹಾರ್ಪಿಕ್​ ಹಾಕಿ ಉಜ್ಜುತ್ತೇವೆ. ಜನ ಹೆಚ್ಚಾಗಿಲ್ಲ- ಮನೆಯಲ್ಲಿರೋದು ಮೂರೇ ಮಂದಿ. ಆದರೆ ನಾವು ಬಳಸೋ ಹಾರ್ಪಿಕ್ ಅಗತ್ಯಕ್ಕಿಂತ 10 ಪಟ್ಟು ಹೆಚ್ಚು ಮಾಡಿಕೊಂಡಿದ್ದೇವೆ. ಹಾರ್ಪಿಕ್ ಖರೀದಿ ಹೆಚ್ಚಾದಷ್ಟು ಪೌಷ್ಟಿಕಾಂಶ ಬರುತ್ತದೆ ಎನ್ನೋದಕ್ಕೆ ಅದೇನು ತಿನ್ನೋ ವಸ್ತುವಾ? ಅಲ್ಲ- ಆದರೆ ನಾವು ಅನಗತ್ಯವಾಗಿ ಖರೀದಿ ಮಾಡುವ ಇಂಥದ್ದೊಂದು ವಸ್ತು ಯಾರ ಜೇಬು ತುಂಬಿಸುತ್ತಿದೆ..? ಯಾರ ಜೇಬು ಖಾಲಿ ಮಾಡಿಸುತ್ತಿದೆ....

ಬಂಡವಾಳ ಹೂಡಿಕೆ ಮಾಡುವವರೇನು ಸೇವಾಕರ್ತರಾ..? ಕೊತ್ತಂಬರಿ ಸೊಪ್ಪು ಮಾರುವವನಿಗೆ ಯಾವ ಲಾಭದ ಆಸೆ ಇರುತ್ತದೋ ಕಾರು ಕಂಪನಿಯ ಮಾಲೀಕನಿಗೂ ಅಷ್ಟೇ ಲಾಭದ ಆಸೆ ಇರುತ್ತದೆ. ಕೊತ್ತಂಬರಿ ಸೊಪ್ಪು ಮಾರುವವನು ಬಾಯಿ ಹರಿದುಕೊಂಡು ಕೂಗಿ ನಮ್ಮನ್ನು ಅಟ್ರಾಕ್ಟ್ ಮಾಡಿ ಸೊಪ್ಪು ಮಾರ್ತಾನೆ- ಸಾವಿರಾರು ಕೋಟಿ ಬಂಡವಾಳ ಹೂಡಿದವನಿಗೆ ಬೇರೆಯದ್ದೇ ರೀತಿಯಲ್ಲಿ ನಮ್ಮನ್ನು ಅಟ್ರಾಕ್ಟ್ ಮಾಡಿ ಜೇಬು ತುಂಬಿಸಿಕೊಳ್ತಾನೆ- ಇದನ್ನು ನೀವೆಲ್ಲ ಆರ್ಥಿಕ ಪ್ರಗತಿ, ಜಿಡಿಪಿ ಗ್ರೋತ್ ಅಂತ ಕರೀತಿರಿ ಅಂತಾದ್ರೆ ಅದು ಭ್ರಮೆಯೇ ಅಲ್ಲವಾ...?

ಕಾರು ಕಂಪನಿಗಳಲ್ಲಿ 350000 ಉದ್ಯೋಗಗಳನ್ನು ಕಡಿತ ಮಾಡಲಾಯ್ತು ಅನ್ನೋ ವರದಿಯಿದೆ. ಕಾರು ಕಂಪನಿಗಳು ಜನರ ಮನಸ್ಸಿನ ಭಾವನೆ, ಆರ್ಥಿಕತೆ ನೋಡಿಕೊಂಡು ಕಾರುಗಳ ಉತ್ಪಾದನೆ ಮಾಡಿದರಾ..?  ಬೆಂಗಳೂರಲ್ಲಿ 1 ಕೋಟಿ ಜನ ಇದ್ದಾರೆ, ಅದರಲ್ಲಿ ಅರ್ಧದಷ್ಟು ಜನ ಮುಂದಿನ ಎರಡು ವರ್ಷಗಳಲ್ಲಿ ಕಾರು ಖರೀದಿ ಮಾಡ್ತಾರೆ ಅಂತ ಭಾವಿಸಿ ಕಾರು ಉತ್ಪಾದನೆ ಮಾಡೋದು ಆರ್ಥಿಕತೆಗೆ ಬಂಡವಾಳಶಾಹಿಗಳು ಕೊಟ್ಟ ಕೊಡುಗೆಯಾ..?

ಕೆಲವು ವರ್ಷಗಳ ಹಿಂದೆ- ರಿಯಲ್ ಎಸ್ಟೇಟ್ ಫೀಲ್ಡ್ ಬೂಮ್​ ಆಗಿತ್ತು. ಆ ಸಂದರ್ಭದಲ್ಲಿ ಹಿಂದೆ ಮುಂದೆ ನೋಡದೇ ಅಪಾರ್ಟ್​​ಮೆಂಟ್ ಗಳನ್ನು ಕಟ್ಟಿದವರೆಷ್ಟೊ.. ಲೇಔಟ್ ಗಳನ್ನು ಮಾಡಿದವರೆಷ್ಟೋ... ಸೈಟ್ ಗಳನ್ನು ಮಾರಾಟಕ್ಕೆ ನಿಂತವರೆಷ್ಟೋ.... ಸದ್ಯಕ್ಕೆ ಜನ ಫ್ಲ್ಯಾಟ್ ಖರೀದಿ ಮಾಡ್ತಿಲ್ಲ, ಅಪಾರ್ಟ್​ಮೆಂಟ್ ಗಳ ಕಡೆ ತಲೆ ಹಾಕೋದಕ್ಕಿಂತ ಬಾಡಿಗೆ ಮನೆಯೇ ಒಳ್ಳೆಯದು ಅಂತ ಅನಿಸುತ್ತಿದೆ, ಸೈಟ್ ಗಳನ್ನು ಮಾರಾಟ ಮಾಡುವವರೇ ಜಾಸ್ತಿ ಆದಾಗ ಖರೀದಿ ಮಾಡುವುವರು ಯಾರಿರ್ತಾರೆ...? ಇದನ್ನು ಆರ್ಥಿಕ ಕುಸಿತ ಅಂತ ಕರೆಯೋದಾದರೆ ಇದಕ್ಕೆ ಕಾರಣ ಯಾರು..? ಮತ್ತದೇ ಬಂಡವಾಳ ಹೂಡಿಕೆದಾರರೇ ತಾನೆ..?

ಸಿದ್ದಾರ್ಥ್ ಅವರ ಸಾವಿನಿಂದ ಟ್ಯಾಕ್ಸ್ ಟೆರರಿಸಂ ಅನ್ನೋ ಮಾತು ಬಂದವು. ಟ್ಯಾಕ್ಸ್ ಟೆರರಿಸಂ ನ ಚರ್ಚೆಯನ್ನು ನಾವು ಸದ್ಯಕ್ಕೆ ಮಾತನಾಡೋದು ಬೇಡ- ಅದು ಬೇರೆಯದ್ದೇ ಚರ್ಚೆ. ಆದರೆ ಸಿದ್ದಾರ್ಥ್ ಹೂಡಿದ್ದ ಬಂಡವಾಳ ಎಷ್ಟು ಅಗತ್ಯ ಇತ್ತು ಅನ್ನೋ ಚರ್ಚಯನ್ನು ಯಾರು ಯಾಕೆ ಮಾಡ್ತಿಲ್ಲ..? ದೇಶಾದ್ಯಂತ 1700 ಕ್ಕೂ ಹೆಚ್ಚು ಕೆಫೆ ಕಾಫಿ ಡೇ ಗಳನ್ನು ಸಿದ್ದಾರ್ಥ್ ರೆಡಿ ಮಾಡಿದ್ದರು. ಇದರಲ್ಲಿ ಎಷ್ಟು ಕೆಫೆ ಕಾಫಿ ಡೇ ಗಳು ನಷ್ಟದಲ್ಲಿದ್ದವು ಅನ್ನೋದೂ ಕೂಡ ಬೇಕಲ್ಲ... ನಷ್ಟದಲ್ಲಿದ್ದರೂ ಕೂಡ ಅಥವಾ ನಿರೀಕ್ಷೆಗಿಂತ ಜನರೇ ಬರದಿದ್ದರೆ ಅದನ್ನೂ ಮುಂದುವರೆಸಿ ಆ ಮೂಲಕ ಸೂಡೋ ಡೆವಲಪ್ಮೆಂಟ್ ಸೃಷ್ಟಿ ಮಾಡಲಾಗುತ್ತಿತ್ತಲ್ಲ ಅದಕ್ಕೆ ಯಾರು ಹೊಣೆ..?

ನಮ್ಮ ನಿಮ್ಮೆಲ್ಲರ ಮನಸ್ಥಿತಿಗಳೇ ಆರ್ಥಿಕ ಕುಸಿತಕ್ಕೆ, ಆರ್ಥಿಕ ಹಿಂಜರಿತಕ್ಕೆ, ಆರ್ಥಿಕ ಅಸಮತೋಲನಕ್ಕೆ ಕಾರಣ ಅಂತ ನನ್ನ ಭಾವನೆ. ನಮಗೆ ಬ್ರ್ಯಾಂಡೆಡ್ ಐಟಂ ಗಳ ಹಚ್ಚು ತಲೆಯೊಳಗೆ ಹೊಕ್ಕಿದ್ದೇ ತಡ- ಇಂಥ ಏರಿಳಿತಗಳಿಗೆ ಕಾರಣವಾಗಿದೆ. 100 ರೂ ಕೊಡುವ ಕಡೆ 1000 ರೂ ಕೊಡ್ತಿದ್ದೇವೆ, 12 ರೂ. ಗಿಫ್ಟ್ ವೋಚರ್ ಆಸೆಗೆ 1000 ರೂಪಾಯಿ ವ್ಯಯಿಸೋ ಕಡೆ 5000 ಸಾವಿರ ಶಾಪಿಂಗ್ ಮಡ್ತಿದ್ದೇವೆ, 17 ರೂಪಾಯಿ ಕ್ಯಾಶ್ ಬ್ಯಾಕ್ ಬರತ್ತೆ ಎನ್ನೋ ಚಪಲಕ್ಕೆ ಸುಖಾಸುಮನ್ನೆ ಹಣವನ್ನು ಮೊಬೈಲ್​ ಆಪ್​ ಗಳನ್ನು ಟರ್ನ್ ಓವರ್ ಮಾಡ್ತಿದ್ದೇವೆ.
ಇದೆಲ್ಲ ಕೇವಲ ಭ್ರಮೆಯ ಆರ್ಥಿಕ ಬೆಳವಣಿಗೆ ಅಂತ ಅನಿಸೋದಿಲ್ಲವಾ..?

Thursday, August 23, 2012

ನಡೆದೂ ನಡೆದೂ ನಾಕ...


ನಡೆಯೋದ್ರಲ್ಲಿ ಸುಖ ಇದೆ.
ಇದು ಮೊಟ್ಟಮೊದಲ ಸಲ ನಾನು ಅನ್ವೇಷಣೆ ಮಾಡಿ ಹೇಳ್ತಿರೋ ಮಾತುಗಳಲ್ಲ. ಹತ್ತಾರು ಸಲ ನೀವೂ ಈ ಮಾತುಗಳನ್ನ ಎಲ್ಲಿಯಾದ್ರೂ ಕೇಳಿರ್ತೀರಿ - ಓದಿರ್ತೀರಿ. ಏನೇ ಹೇಳಿ- ನಡೆಯೋದು ಏನೋ ಒಂಥರಾ ಮಜಾ ಕೊಡುತ್ತೆ.
ಈ ಖದೀಮ ಮನಸ್ಸಿಗೆ ವಾರವಿಡೀ ಒಂದೇ ಥರಹ ಇರೋದಕ್ಕೆ ಬರೋದಿಲ್ಲ. ಅಪ್ಪ ಆಯಿ ಹತ್ತಿರ ವಾದ ಮಾಡಿಕೊಂಡ ದಿನ ಒಂಥರಾ , ಅವಳು ಮುನಿಸಿಕೊಂಡಾಗ ಮತ್ತೊಂದು ಥರಾ , ಮಾಡಿದ ಸುದ್ದಿ ಎರಡೇ ನಿಮಿಷವಾದರೂ ಅದು ಬಂದಾಗ- ಬರದೇ ಇದ್ದಾಗ ಇನ್ನೊಂದು ಥರ, ಹಿಂದುಗಡೆ ಜೇಬಿನ ಪರ್ಸು ದಪ್ಪವಾಗಿದ್ದಾಗ ಒಂದು ರೀತಿ - ತಿಂಗಳ ಕೊನೆಗೆ ಹತ್ತೇ ರೂಪಾಯಿ ಉಳಿದು , ಹೊಸ ತಿಂಗಳಿನ 7 ನೇ ತಾರೀಖು ಬಂದರೂ ಅಕೌಂಟಿಗೆ ಸಂಬಳ ಬೀಳದೇ ಇದ್ದಾಗ ಮತ್ತೊಂದು ಥರಾ, ಒಂಟಿ ಜೀವದ ಸುಪ್ತಕಾಮ ಕೆರಳಿ ನಿಂತಾಗ ಮತ್ಯಾವುದೋ ಥರಾ...... ಒಟ್ಟಿನಲ್ಲಿ ಖದೀಮ ಮನಸ್ಸು ಹುತಾತ್ಮನ ಸಾಲಿಗೇ ಸೇರುತ್ತೆ. ಮನಸ್ಸು ವಿಲವಿಲ ಅನ್ನುವ ಇಂಥ ಹೊತ್ತಲ್ಲಿ ನೆನಪಾಗೋದು- ಒಂದು ಸುತ್ತಿನ ನಡಿಗೆ. ಕಡ್ಡಾಯವಾಗಿ ದಿನವೂ ನಡೆಯಲೇಬೇಕು ಅನ್ನುವುದಕ್ಕೆ ದೇಹಕ್ಕೆ ಶುಗರ್ ಇಲ್ಲ. ಕೊಬ್ಬು(?) ಮೊದಲೇ ಇಲ್ಲ. ಕಟ್ಟು ನಿಟ್ಟಾಗಿ ವ್ಯಾಯಾಮದ ರೀತಿ ನಡೆಯುವುದಕ್ಕೆ ಉದಾಸೀನವೇ ಅಡ್ಡಿ.
ಹೀಗಾಗಿ ಹೇಳಲಾಗದ ಆತಂಕವೊಂದು ಕಾಡಿದಾಗ ದುತ್ತನೆ ಎದ್ದು ಹೊರ ನಡೆದು... ನಡೆದು..... ನಡೆದು..... ಯೆಸ್‌ ಅದೊಂದೇ ಗೊತ್ತು., ನಡೆದೂ ನಡೆದೂ ತನ್ನಿಂದ ತಾನೇ ಮನಸ್ಸು ಹಗುರವಾಗುತ್ತೆ. ನಡೆದೂ ನಡೆದೂ ಹಣೆಯ ಉಬ್ಬು ಬೆವರ ಸಾಲಿನಲ್ಲಿ ತೊಯ್ದು ಉಸ್ ಅನ್ನಬೇಕು ಅಷ್ಟೆ- ಚಿಗಿತಿದ್ದ ಕಾಮ, ಅಬ್ಬರಿಸುತ್ತಿದ್ದ ಕೋಪ, ಅವಳು ಇನ್ಯಾರಿಗೋ ಕಾಲ್ ಮಾಡಿದ್ದಾಳೆ ಅನ್ನುವ ಪೊಸೆಸಿವ್ ನೆಸ್ ನ ಪರಮಭಾವ, ಅಪ್ಪ ಆಯಿಯ ಜೊತೆ ಮಾಡಿಕೊಂಡ ವಾದ ವಿವಾದ ಅಲಿಯಾಸ್ ಜಗಳ, ದುಡ್ಡಿಲ್ಲದ ಆತಂಕ , ದುಡಿಮೆಯಿಲ್ಲ ಅನ್ನುವ ನಿರಾಸೆ ಎಲ್ಲವೂ ಖಾಲಿ. ನಡೆದೂ ನಡೆದೂ ಖಾಲಿ.
ಎಲ್ಲರಿಗೂ ಹೀಗೇ ಆಗುತ್ತದೋ ಇಲ್ಲವೋ ಗೊತ್ತಿಲ್ಲ- ಆದರೆ ನಡೆದೂ ನಡೆದೂ ಸುಸ್ತಾದಷ್ಟು ಮನಸ್ಸು ಮುಗಿಲು ಮುಟ್ಟುವುದು ಖಂಡಿತ. ನಡೆದಷ್ಟೂ ಮನಸಿಗೆ ಹುಮ್ಮಸ್ಸು ತುಂಬುವುದು ಗ್ಯಾರಂಟಿ. ಒಂದು ರೀತಿ ರಿಫ್ರೆಷ್ ಆಗೋದು ಶತಸಿದ್ದ. ಅಹಂಭಾವ ಅತಿರೇಕಗೊಂಡು ಸುಖಾ ಸುಮ್ಮನೆ ಗೆಳೆಯರೊಟ್ಟಿಗೆ ಅಡಿದ ಜಗಳ ಎಂಥ ಮೂರ್ಖತನದ್ದು ಅಂತ ಗೊತ್ತಾಗೋದು ನಡಿಗೆಯಿಂದ. ಅವಳ ಮೇಲಿನ ಮೋಹ ವಿಪರೀತಗೊಂಡದ್ದು- ಸುಳ್ಳು ಬೇಸರವೊಂದನ್ನು ತಂದಿಟ್ಟುಕೊಂಡದ್ದು ಎಷ್ಟು ಸಿಲ್ಲಿ ಅನಿಸೋದು ನಡಿಗೆಯಿಂದ. ಎಲ್ಲ ಬೇಸರಗಳಿಗೂ ಎಳ್ಳು ನೀರು ಹಾಕಿ ಪಿಂಡ ಬಿಡೋಣ ಅನಿಸಿ ಮನಸ್ಸು ನಗೋದು ನಡಿಗೆಯಿಂದ. ಅದಕ್ಕೇ ಹೇಳೋದು- ನಡೆಯೋದ್ರಲ್ಲಿ ಮಜಾ ಇದೆ.
ನನ್ನಜ್ಜನಿಗೆ ಆಚೀಚೆ 85 ವರ್ಷ. ಗಟ್ಟಿಮುಟ್ಟು ಜೀವ. ಈ ವಯಸ್ಸಲ್ಲೂ ಪ್ರತಿ ದಿನ ಕನಿಷ್ಠ 6-7 ಕಿಲೋ ಮೀಟರ್ ನಡೆದುಹೋಗಿ ದೇವಸ್ಥಾನದ ಪೂಜೆ ಮಾಡ್ತಾರೆ. ಅದೆಷ್ಟೋ ಜನ ಹೇಳಿದ್ದಿದೆ- ಇಂಥ ವಯಸ್ಸಲ್ಲಿ ಈ ಅಜ್ಜಯ್ಯಂಗೆ ದುಡಿಮೆ ಬೇಕಾ? ಮಕ್ಕಳಾದ್ರೂ ಬುದ್ದಿ ಹೇಳಿ ಮನೆಯಲ್ಲೇ ಕೂರಿಸಬಾರದಾ? ಅಂತ. ನಿಜ, ಆ ವಯಸ್ಸಲ್ಲಿ ದುಡಿಯೋ ಅವಶ್ಯಕತೆ ಬೇಕಿಲ್ಲ. ಆದರೆ ನನ್ನಜ್ಜಯ್ಯ ನಡೆದೂ ನಡೆದೂ ದೇವಸ್ಥಾನದ ಪೂಜೆ ಮಾಡೋದು ದುಡಿಬೇಕು ಅಂತಲ್ಲ. ನನಗನಿಸೋದು ಅವರಿಗೆ ನಡೆಯೋದಿಷ್ಟ. ಅದಕ್ಕೇ ದೇವಸ್ಥಾನದ ನೆಪ ಮಾಡಿಕೊಂಡು ಮಕ್ಕಳು ಬೈದು ಕೂರಿಸಿದರೂ ಕೂಡ ನಡೆಯತೊಡಗ್ತಾರೆ. ನಡೆದಷ್ಟೂ ಅಜ್ಜಯ್ಯನ ಮನಸ್ಸು ನಿರಾಳ. ನಡೆದಷ್ಟೂ ಖುಷಿ. ನಡೆದಷ್ಟೂ ಸಂಭ್ರಮ, 85 ರ ಪ್ರಾಯದಲ್ಲೂ ನಡೆದಷ್ಟೂಯೌವನ, ನಡೆದಷ್ಟೂ ಸಾಧನೆ. ನಡೆಯೋದೇ ಜೀವನ. ನಡೆದು ನಡೆದೇ ಮಗ ಸತ್ತ ನೆನಪನ್ನು ಅಜ್ಜಯ್ಯ ಮರೆತಿದ್ದಾರೆ. ಅಜ್ಜಯ್ಯ ನಡೆಯೋದು ನಿಲ್ಲಿಸಿ ಮನೆಯಲ್ಲೇ ಕೂತ ದಿನ ಅವರಿಗೆ ಸಂಜೆಯ ಹೊತ್ತಿಗೆ ಎಂದೂ ಇಲ್ಲದ ಜ್ವರ ನೆತ್ತಿಗೇರುತ್ತೆ. ಎಂದೂ ಇಲ್ಲದ ಕೆಮ್ಮು ರಾತ್ರಿ ಇಡೀ ಕಾಡುತ್ತೆ. ಹಠ ಹಿಡಿದು ಮರುದಿನ ಎದ್ದು ನಡೆದರೆ ಸಾಕು- ಅಜ್ಜಯ್ಯ ಫುಲ್ ರಿಲೀಫ್‌. ನಡಿಗೆಯ ಸುಖ ಅಂದರೆ ಅದೇ ಇರಬೇಕು.
ತಿರುಪತಿ, ಧರ್ಮಸ್ಥಳ, ಶಬರಿಮಲೆಗೆ ಪಾದಯಾತ್ರೆ ಮಾಡುವುದರ ಹಿನ್ನೆಲೆಯೂ ಇಂಥದ್ದೇ. ಪಾದಕ್ಕೆ ಬೊಬ್ಬೆಯಾಗಿ ರಕ್ತ ಒಸರುವಷ್ಟು ನಡೆದವರೂ ಕೂಡ ಹ್ಯಾಪಿಯಾಗಿರ್ತಾರೆ. ಅದಕ್ಕೆ ಕಾರಣ- ಸನ್ನಿಧಿಗೆ ಕರೆಸಿಕೊಂಡ ದೇವರಲ್ಲ- ನಡೆದು ನಡೆದೂ ದಕ್ಕಿದ ಸುಖ.
ಎರಡು ಚಕ್ರದ ಬೈಕನ್ನು ನಂಬಿಕೊಂಡ ಜೀವ ನಮ್ಮದು-- ಸಂಜೆಯ ಹೊತ್ತಿಗೆ ಸಣ್ಣ ಸಣ್ಣ ಸಂಗತಿಗಳಿಗೂ ಮನಸ್ಸು ಮುಗುಮ್ಮಾಗಿ ಸಿಟ್ಟಾಗುತ್ತೆ. ಮರುಗುತ್ತೆ, ಪ್ರಾಯದಲ್ಲಿನ್ನೂ ಬಚ್ಚಾ ಅನ್ನುವಾಗಲೇ ಕೋಪ ವಿಪರೀತ. ದುರಂತ ಎಂದರೆ , ಹಳೆಯ ಕಾಲಕ್ಕೂ ಇಂದಿನ ಕಾಲಕ್ಕೂ ಇರುವ ವ್ಯತ್ಯಾಸಗಳನ್ನ ಪಟ್ಟಿ ಮಾಡುತ್ತಾ ಹೋದರೆ ನಡಿಗೆ ಕೂಡ ಆ ಸಾಲಿಗೆ ಸೇರುತ್ತೆ. ಸರಿಯಾಗಿ ಗಮನಿಸಿ ನೋಡಿ ನಾವಷ್ಟೇ ನಡಿಗೆಯನ್ನು ಮರೆತಿಲ್ಲ , ನಮ್ಮ ಮಕ್ಕಳಿಗೂ ನಡೆಯುವುದನ್ನು ಮರೆಸುತ್ತಿದ್ದೀವಿ. ಗಾಡಿಗಳು ಹೆಚ್ಚಾಗಿವೆ, ಯಾವ ಕ್ಷಣಕ್ಕೆ ಎಲ್ಲಿ ಆಕ್ಸಿಡೆಂಟ್ ಆಗಿಬಿಡತ್ತೋ ಎನ್ನುವ ಕಳವಳ ನಮ್ಮದು , ದಿನ ಬೆಳಗಾದರೆ ಶಾಲೆಗೆ ಹೋಗುವುದಕ್ಕೂ ಓಮಿನಿ, ಆಟೋ , ಸ್ಕೂಲ್ ಗಾಡಿಗಳು ಮನೆ ಮುಂದೆ ನಿಲ್ಲುತ್ತವೆ. ನಮ್ಮ ಮಕ್ಕಳನ್ನ ಗಾಡಿಗಳಲ್ಲೇ ಕೊಂಡೊಯ್ದು ಗಾಡಿಗಳಲ್ಲೇ ಮನೆಗೆ ತಂದು ಬಿಡ್ತಾರೆ. ನಡಿಯೋದು ಹೇಗೆ?  ಆಫೀಸಿಗೆ ಬೈಕು , ಆಟೋ , ಕಾರು , ಬಸ್ಸು.... ನಡೆಯೋದು ಅಂದ್ರೆ ದೂರ ದೂರ.  ಸುಮ್ಮನೆ ಕೈ ಬೀಸಿ ನಡೆಯುವುದಕ್ಕೂ ಆಟ ಆಡುವುದಕ್ಕೂ ವ್ಯತ್ಯಾಸ ಇದ್ದೇ ಇದೆ.
ಹತ್ತಾರು ಕಾರಣಗಳ ಮಧ್ಯೆ ಉಳಿದೆಲ್ಲ ಸಂಗತಿಗಳ ಹಾಗೆ ನಮ್ಮ ನಮ್ಮ ನಡಿಗೆ ಕೂಡ ಬದಲಾಗಿದೆ. ನಡೆಯುವ ವೇಗವೂ ಬದಲಾಗಿದೆ.
ಅದಕ್ಕೇ ಪುನಃ ಹೇಳಿದ್ದು - ನಡೆದೂ ನಡೆದೂ ನಾಕ ಕಂಡವರೇ ಹಿತವರು.

Tuesday, March 1, 2011

ಇದೆ ಸರಿ..!

ನಾವು ದೊಡ್ಡವರಾಗುತ್ತ ಹೋದಂತೆ ಅದೆಷ್ಟು ಸಂಕೀರ್ಣವಾಗುತ್ತಾ ಹೋಗ್ತಿವಲ್ಲವಾ?
ಪ್ರತಿಯೊಂದನ್ನೂ ಲೆಕ್ಕಾಚಾರ ಹಾಕೆ ತೂಗುತ್ತೆವಲ್ಲವಾ..? ನಮ್ಮ ಪಕ್ಕದಲ್ಲೇ ಜೊತೆ ಜೊತೆಗೆ ಬದುಕುವವರ ಮೇಲೆ ಸಾವಿರ ಸಂಶಯಗಳು..ತುತ್ತು ಹಂಚಿಕೊಳ್ಳುವವರ ಎದುರಲ್ಲೇ ನೂರೆಂಟು ಸುಳ್ಳುಗಳು...
ಸಣ್ಣ ಹಸುಳೆ, ಏನೂ ಗೊತ್ತಿಲ್ಲದ ಕಂದಮ್ಮ ಇದನ್ನೆಲ್ಲಾ ನೋಡಿಯೇ ಹೆಜ್ಜೆ ಕಲಿಯೋದು..ಎಡವೋದು..ಮುಗ್ಗರಿಸಿ ಬಿದ್ದು ಮತ್ತೆದ್ದು ಮುಗ್ದತೆಯನ್ನ ಕಳಕೊಂಡು ದೊಡ್ದವನಾಗೋದು.. ಜಗತ್ತಿನ ಎಲ್ಲ ಬೂಟಾಟಿಕೆ ನಾಟಕ ತಿಳಿದಾಗಲೇ ನಮಗೆ ನಮ್ಮ ಬಾಲ್ಯ ನೆನಪಾಗೊದಲ್ಲವಾ?

....ನಿಜ...ಆ ಮುಗ್ದಾತಿ ಮುಗ್ದ ಬಾಲ್ಯ ಯಾಕಾದರೂ ಕಳೆದು ಹೋಯ್ತೋ ಅನ್ನೋ ಸಂಕಟ.. ನಮ್ಮ ಮನಸ್ಸಿಗೆ ನೋವಾದಾಗಲೆಲ್ಲ ಇಂತದ್ದೊಂದು ಸಂಕಟ ಕಾಡುತ್ತದೆ. ಏನೇನು ಕೊಳಚೆ ಮನಸಲ್ಲಿರದ ಆ ಬಾಲ್ಯ ಮತ್ಯಾಕೆ ಬರೋದಿಲ್ಲ ಅನಿಸುತ್ತದೆ. 

ಒಮ್ಮೆ ಯಾವುದೋ ಪುಸ್ತಕದಲ್ಲಿ ಓದಿದ ನೆನಪು - ೨೦ರ ಹುಡುಗನೊಬ್ಬ ಅಂದುಕೊಳ್ಳುತ್ತಾನೆ- ನಾನು ಚಿಕ್ಕವನೆ ಇರಬೇಕಿತ್ತು , ಈಗ ದೊಡ್ದವನ್ನಗಿಬಿಟ್ಟೆ,ಅಮ್ಮ ಅಕ್ಕ ತಿಂಗಳಲ್ಲಿ ೩ ದಿನ ಹೊರಗೆ ಯಾಕೆ ಕೂರುತ್ತಾರೆ ಅನ್ನೋದೆಲ್ಲ ಅರ್ಥ ಆಗಿ, ಏನೋ ಒಂತರ ಅನಿಸುತ್ತೆ.ಏನು ಮಾಡ್ಲಿ? ಅಂತ. 

ನಿಜ...ಇವತ್ತು ಕೆಲಸ ಮಾಡೋ ಜಾಗದಲ್ಲಿ ನೂರಾರು ಜನ ಬೆನ್ನ ಹಿಂದೆ ಮಾತಾಡುತ್ತಾರೆ. ಕಾಲೆಳೆಯಲು ಕಾದು ನಿಂತಿರ್ತಾರೆ. ಎಂತೆಂತ ಅತಿರಥ ಮಹಾರಥರು ಬೆನ್ನ ಹಿಂದೆ ಕಾಣದೆ ಸೋತು ಹೋದರಲ್ವಾ? ಅವರೆಲ್ಲರೂ ತಮ್ಮ ಚಿಕ್ಕಂದಿನ ದಿನಗಳನ್ನ ನೆನೆಸಿಕೊಂಡಿರಬೇಕು..ಕಳೆದ ಬಾಲ್ಯದ ನೆನಪಿಗೆ ಮರ ಮರ ಮರುಗಿರಬೇಕು...ಎಷ್ಟೇ ಮರುಗಿದರೂ ಕಳೆದ ಮುಗ್ದತೆಯ ಆ  ದಿನ ಮತ್ತೆ ಬರೋದಿಲ್ಲ ಅನ್ನೋ ಸತ್ಯಕ್ಕೆ ತಲೆ ಬಾಗಿ ಹೊರಟು ನಿಂತಿರಬೇಕು...

ನಾವೂ ಹಾಗೆ ಮಾಡದೆ ವಿಧಿ ಇಲ್ಲ... ಕಳೆದ ನೆನಪುಗಳು ಸಿಹಿಯಾಗೆ ಇದ್ದವು ಅಂತ ಸಮಾಧಾನ ಪಟ್ಟುಕೊಂಡು ಮುಂದಿನ ಕೆಲಸಗಳನ್ನ ಮುಗಿಸಬೇಕು.. ಅದೇ ನ್ಯಾಯ...!!

Wednesday, August 25, 2010

...!

ಬದುಕು ಬೆಳೆಯಲಿ
ಎತ್ತರೆತ್ತರ ,
ತೆಂಗಿನೆತ್ತರ,
ಮುಗಿಲ ಮಾಳಿಗೆ
ಮುಟ್ಟುವಾತರ...!!